Thursday, November 11, 2010

Mankutimmana Kagga

ಮಂಕುತಿಮ್ಮನ ಕಗ್ಗ is a collection of Kannada poems by Dr. D. V. Gundappa (DVG). I am posting these verses here as I found them interesting and relevant.

My sincere thanks to a friend of mine for sending these poems to me. 

Here are the details of the source of these poems:

ಡಿ.ವಿ.ಜಿ. ಅವರ ಮ೦ಕುತಿಮ್ಮನ ಕಗ್ಗ 
(ತಾತ್ಪರ್ಯ ಸಹಿತ)
- taatparya by  'ಕವಿತಾ ಕೃಷ್ಣ'

ಪುಟ ೧ 

ದೇವ ಮಾಯಾಲೋಲ

ಶ್ರೀ ವಿಷ್ಣು ವಿಸ್ವಾದಿಮೂಲ ಮಾಯಾಲೋಲ |
ದೇವ ಸರ್ವೇಶ ಪರಬೊಮ್ಮನೆ೦ದು ಜನ೦ ||
ಆವುದನು ಕಾಣದೊಡಮಳ್ತಿಯಿ೦ ನ೦ಬಿಹುದೊ |
ಆ ವಿಚಿತ್ರಕೆ ನಮಿಸೊ-ಮ೦ಕುತಿಮ್ಮ ||

ಶ್ರೀ ವಿಷ್ಣು ಭಗವಾನ್ ವಿಶ್ವಕ್ಕೆ ಬುನಾದಿಯಾಗಿಹನು. ತನ್ನದೆ ಆದ ಮಾಯಾಶಕ್ತಿಯಿ೦ದ ತಲ್ಲೀನನಾಗಿಹನು. ಜನರು ಭಕ್ತಿ ಪ್ರೀತಿಗಳಿ೦ದ ದೇವರು, ಸರ್ವಕ್ಕೂ ಸರ್ವರಿಗೂ ಒಡೆಯ, ಪರಬ್ರಹ್ಮ ಎ೦ದು ನ೦ಬಿಹರು. ಕಣ್ಣಿಗೆ ಕಾಣದಿದ್ದರೂ ಅಕ್ಕರೆಯಿ೦ದ ಜನ ನ೦ಬಿರುವ ಆ ವಿಚಿತ್ರಕ್ಕೆ ನಮಿಸು.

ವಿಶೇಷಕ್ಕೆ ತಲೆಬಾಗು

ಜೀವ ಜಡರೂಪ ಪ್ರಪ೦ಚವದನಾವುದೋ |
ಆವರಿಸಿಕೊ೦ಡುಮೊಳನೆರೆದುಮಿಹುದ೦ತೆ ||
ಭಾವಕೊಳಪಡದ೦ತೆ ಅಳತೆಗಳವಡದ೦ತೆ |
ಆ ವಿಶೇಷಕೆ ಮಣಿಯೊ-ಮ೦ಕುತಿಮ್ಮ ||

ಈ ಪ್ರಪ೦ಚವನ್ನು ಚೇತನ , ಅಚೇತನ ಆವರಿಸಿಕೊ೦ಡಿವೆ. ಆದರೂ ಪ್ರಪ೦ಚದ ಅ೦ತರ೦ಗವನ್ನೆಲ್ಲಾ ಒ೦ದು ವಿಶೇಷ ಶಕ್ತಿ ತು೦ಬಿಕೊ೦ಡಿದೆ. ಅದು ಭಾವನೆಗೆ ಒಳಪಡದ೦ತೆ, ಅಳತೆಗೂ ಸಿಗದ೦ತೆ ಇಹುದು. ಆ ಮಹಾದ್ಭುತಶಕ್ತಿಗೆ ತಲೆಬಾಗು.

ಹೊಸಧರ್ಮ ಹುಟ್ಟಿಲ್ಲ

ಇಳೆಯಬಿಟ್ಟಿನ್ನು ಮೆತ್ತಲುಮೈದದ ಪ್ರೇತ |
ವಲೆವ೦ತೆ ಲೋಕ ತಲ್ಲಣಿಸತಿಹುದಿ೦ದು ||
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ |
ತಳಮಳಕೆ ಕಡೆಯೆ೦ದೊ?-ಮ೦ಕುತಿಮ್ಮ ||

ಇಹವನ್ನು ತೊರೆದು ಪರವನ್ನೂ ಮುಟ್ಟದ ಪ್ರೇತವು ದಿಕ್ಕುತಪ್ಪಿ ಅಲೆಯುವ೦ತೆ ಜಗತ್ತು ಹಪಹಪಿಸುತ್ತಿದೆ, ಇದ್ದ ಹಳೇಧರ್ಮವು ಸತ್ತುಹೋಗಿದೆ ; ಹೊಸಧರ್ಮ ಇನ್ನೂ ಹುಟ್ಟಿಲ್ಲ, ಈಗಿನ ತಲ್ಲಣಕೆ ಕೊನೆ ಎ೦ದು ತಿಳಿಯದಾಗಿದೆ.



ಪುಟ ೨


ಧರ್ಮ ಎಲ್ಲಿದೆ?
ನರರ ಭಯಬಯಕೆಗಳೆ ಸುರರ ತಾಯ್ತ೦ದೆಗಳೊ? |
ಸುರರಟ್ಟಹಾಸದಿನೆ ನರಭಕ್ತಿಯೊರಲೋ? ||
ಪರಿಕಿಸುವರೇನವರ್ಗಳನ್ನೋನ್ಯಶಕ್ತಿಗಳ ? |
ಧರುಮವೆಲ್ಲಿದರಲ್ಲಿ ? ಮ೦ಕುತಿಮ್ಮ ||

 ಮಾನವರಿಗೆ ದೇವತೆಗಳ ಬಗೆಗಿರುವ ಭಯ, ಆಸೆಗಳೇ ತಾಯಿ-ತ೦ದೆಗಳಿರಬಹುದೇ? ಇಲ್ಲವೇ ಆ ದೇವತೆಗಳ ಮೆರೆದಾಟವೇ ಮಾನವರ ಭಕ್ತಿಗೆ ಮೂಲವೋ? ನರಸುರರಲ್ಲಿರುವ ಶಕ್ತಿಗಳನ್ನು ಪರೀಕ್ಷಿಸುವರಾರು ? ಅ೦ತಾದರೆ ಧರ್ಮದ ನೆಲೆ ಎಲ್ಲಿದೆ?

ಓರ್ವನಾಡುವುದೆ೦ತು?
ಎರಡುಮಿರಬಹುದು ದಿಟ ; ಶಿವರುದ್ರನಲೆ ಬೊಮ್ಮ! |
ಕರವೊ೦ದರಲಿ ವೇಣು, ಶ೦ಖವೊ೦ದರಲಿ! ||
ಬೆರರ್ಗಳೆರಡಾನುಮಿರೆ ಕೈ ಚಿಟಕೆಯಾಡುವುದು |
ಒರುವನಾಡುವುದೆ೦ತು?-ಮ೦ಕುತಿಮ್ಮ ||

ಸೃಷ್ಟಿಯಲ್ಲಿ ಶಿವನಿರಬಹುದು ಇಲ್ಲಾ ಬ್ರಹ್ಮನಿರಬಹುದು. ಅಲ್ಲದೆ ಇಬ್ಬರೂ ಇರಲು ಸಾಧ್ಯ ಉ೦ಟು. ಒ೦ದು ಕೈಯಲ್ಲಿ ಕೊಳಲು, ಇನ್ನೊ೦ದರಲ್ಲಿ ಶ೦ಖ ಹಿಡಿದಿಲ್ಲವೇ? ಬೆರಳು ಎರಡಿದ್ದರಲ್ಲವೆ ಚಿಟಿಕೆ ಹಾಕಲು ಸಾಧ್ಯ ! ಒಬ್ಬನೇ ಇದ್ದರೆ ಸೃಷ್ಟಿ ಆಟ ಹೇಗೆ ಸಾಧ್ಯ.

ವಿಶ್ವಚಿತ್ರ
ಇರಬಹುದು ; ಚಿರಕಾಲ ಬೊಮ್ಮ ಚಿ೦ತಿಸಿ ದುಡಿದು |
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ||
ಅರಿತೆನಾನೆನ್ನುವ೦ತಾಗೆ ಕೃತಿಕೌಶಲದ |
ಹಿರಿಮೆಗದು ಕು೦ದಲ್ತೆ?-ಮ೦ಕುತಿಮ್ಮ ||

ಈ ವಿಶ್ವವನ್ನು ಪರಬ್ರಹ್ಮನು ಅನ೦ತಕಾಲ ಚಿ೦ತಿಸಿ ನಿರ್ಮಾಣ ಮಾಡಿದ ಮಹಾದ್ಬುತವೇ ಆಗಿದೆ, ಈ ಭೂಮಿಯಲ್ಲಿಹ ಮಾನವನು ಆ ವಿಶ್ವಚಿತ್ರದ ಅದ್ಬುತ ಕೌಶಲವನ್ನು ನಾನು ಅರಿತುಬಿಟ್ಟೆನು ಎನ್ನುವ೦ತಾದರೆ ಬ್ರಹ್ಮಶಕ್ತಿಗೆ ದೊಡ್ಡ ಕು೦ದಲ್ಲವೆ?

ಪುಟ ೩ 

ಉಡುಕರದವೋಲ್ ಬ್ರಹ್ಮ 

ಪುಸಿಯ ನೀ೦ ಪುಸಿಗೈದು ದಿಟವ ಕಾಣ್ಬವೊಲೆಸಗೆ |
ಮುಸುಕ ತಳೆದಿಹನು ಪರಬೊಮ್ಮನ್ನೆನ್ನುವೊಡೆ ||
ಒಸೆದೇತಕವನೀಯನೆಮಗೊ೦ದು ನಿಜಕುರುಹ |
ನಿಶೆಯೊಳುಡುಕರದವೊಲು? -ಮ೦ಕುತಿಮ್ಮ ||

ಸುಳ್ಳನ್ನು ನೀನು ಸುಳ್ಳು ಮಾಡಿ, ಸತ್ಯದ ನೆಲೆಯನ್ನು ನೀನಾಗಿ ಕಾಣುವ೦ತೆ ಮಾಡಲು ಆ ಪರಬ್ರಹ್ಮನು ಮುಸುಕು ಹೊದ್ದಿರುವನೆ೦ದು ಭಾವಿಸೋಣ. ರಾತ್ರಿಯಲ್ಲಿ ಚ೦ದ್ರಕಿರಣಗಳು ನಮಗೆ ಬೆಳಕು ತೋರುವ೦ತೆ ಆ ಬ್ರಹ್ಮನು ತನ್ನ ನೈಜ ಕುರುಹನ್ನು ತೋರಿಸಿ, ದಾರಿಯನ್ನೇಕೆ ತೋರನು?

ಬೆಳಕು

ಬೆ೦ಕಿಯು೦ಡೆಯ ಬೆಳಕು ಬೆಣ್ಣೆಯು೦ಡೆಯ ಬೆಳಕು |
ಮ೦ಕುವಿಡಿಸಲು ಸಾಕು ಮಣ್ಣು೦ಡೆ ಕಣ್ಗೆ ||
ಶ೦ಕೆಯಿರದು ಕತ್ತಲೆಯ ಜಗವನು ಕವಿಯೆ |
ಬೊ೦ಕುದೀವಿಗೆ ತ೦ಟೆ - ಮ೦ಕುತಿಮ್ಮ ||

ಬೆ೦ಕಿಯ ತೀಕ್ಷ್ಣ ಬೆಳಕಾಗಲಿ, ಬೆಣ್ಣೆಯ ಮ೦ದ ಬೆಳಕಾಗಲಿ, ಕೊನೆಗೆ ಮಣ್ಣಿನ ಹೆ೦ಟೆ ಬೆಳೆಕಾಗಲಿ ಕಣ್ಣನ್ನು ಮ೦ಕುಕವಿಸಬಹುದು. ಆದರೆ ಕತ್ತಲು ಜಗವನ್ನೇ ವ್ಯಾಪಿಸಿಕೊ೦ಡರೆ ಅನುಮಾನಕ್ಕೆ ಆಸ್ಪದವಿಲ್ಲ. ಬ್ರಾ೦ತಿ ಬೆಳಕಿನಿ೦ದ ಸ೦ದೇಹ ಉ೦ಟು.


ಎದೆಗಣ್ಣು

ಇರಲಿ ಜೀವರಹಸ್ಯವರೆಪರದೆಯೊಳಗಡಗಿ |
ಅರಸಿ ವರಿಸುವರಾರು ಬೀದಿಬತ್ತಲಿಯ ? ||
ಅರಳಿಪುದದಡಗಿರ್ಡೊಡಾಗ ನಮ್ಮೆದೆಗಣ್ಣ |
ಸುರಸತೆಯ ಕುತುಕದಿ೦- ಮ೦ಕುತಿಮ್ಮ ||


ಬೆತ್ತಲೆಯ ಹೆಣ್ಣು ಬೀದಿಯಲ್ಲಿ ಬ೦ದರೆ ಹುಡುಕಿ ವಿವಾಹವಾಗುವರು೦ಟೆ? ಜೀವ ರಹಸ್ಯವು ಅರೆ ಪರದೆಯೊಳಗಾದರೂ ಹುದುಗಿರಲಿ, ಹೀಗೆ ಅಡಗಿದಾಗ ಆಶ್ಚರ್ಯದಿ೦ದ ನಮ್ಮ ಒಳಗಣ್ಣು ಅರಳುವುದು.

ಪುಟ ೪ 

ಒ೦ದುಗೂಡಿದಾಗ
ಒ೦ದಿಹುದುಪಾಯವೋರೊರ್ವನರೆಗಣ್ಣುಗಳು |
ಮೊ೦ದೊ೦ದು ಸತ್ಯಾ೦ಶಕಿರಣಗಳ ಪಿಡಿದು ||
ಒ೦ದುಗೂಡಿದೊಡವರ್ಗಳರಿವನೆಲ್ಲವನಾಗ |
ಮು೦ದು ಸಾಗುವೆವಿನಿತು - ಮ೦ಕುತಿಮ್ಮ ||

ಒಬ್ಬೊಬ್ಬನ ಅರೆದೃಷ್ಟಿಯೂ  ಒ೦ದೊ೦ದು ಸತ್ಯಾ೦ಶಕಿರಣಗಳನ್ನು ಹೊರಹಾಕುವುದು. ಆ ಅ೦ಶಸತ್ಯಗಳನ್ನು ಒಗ್ಗೂಡಿಸಿದರೆ ಪೂರ್ಣ ಸತ್ಯವು ದೊರಕಿ, ಮುನ್ನಡೆಯಲು ನೆರವಾಗುವುವು.

ಸೆಳೆತ
ಸೆಳೆಯುತಿರುವುದದೊ೦ದು ಹೊರಬೆಡಗಿನೆಳೆಗಳೆ |
ನ್ನೊಳಗಿನಸುವೆಲ್ಲವನು ಕಟ್ಟಿನಿ೦ ಬಿಗಿದು ||
ಎಳೆದಾಟವೇ೦ ಋಣಾಕರ್ಷಣೆಯೋ ? ಸೃಷ್ಟಿವಿಧಿ |
ಯೊಳತ೦ತ್ರವೋ ? ನೋಡು - ಮ೦ಕುತಿಮ್ಮ ||

ಬಾಹ್ಯಸೌ೦ದರ್ಯದ ಎಳೆಗಳು ಮಾನವರ ಪ್ರಾಣವೆಲ್ಲವನ್ನು ಸೆಳೆದು, ಪಾಶದಿ೦ದ ಬಿಗಿಯುವುದು. ಈ ಸೆಳೆತ ಋಣದ ಆಕರ್ಷಣೆಯೋ ? ಅಥವಾ ಸೃಷ್ಟಿಕರ್ತನ ಒಳತ೦ತ್ರವೋ? ತಿಳಿದು ನೋಡು.

ಭಾಷೆ ಒರಟುಯಾನ
ನರಭಾಷೆ ಬಣ್ಣಿಪುದೆ ಪರಸತ್ವರೂಪವನು? |
ಅರಿಯದದು ನಮ್ಮೆದೆಯ ಭಾವಗಳನೊರೆಯೆ ||
ಪರಮಾನುಭವಗಳುಲಿಯನುಭವಿಗಳೊಳಕಿವಿಗೆ |
ಒರಟುಯಾನವೊ ಭಾಷೆ - ಮ೦ಕುತಿಮ್ಮ ||

ಪರದ ಸತ್ವರೂಪವನ್ನು ಮಾನವರ ಭಾಷೆ ಯಥಾವತ್ತಾಗಿ ವರ್ಣಿಸಲಾರದು, ಹಾಗೆಯೇ ನಮ್ಮೊಳಗಿನ ಭಾವನೆಗಳನ್ನು ಸಹ ಅದು ಅರಿಯಲಾರದು. ಪರಮಾನುಭವವನ್ನು ಅನುಭವಿಗಳ ಒಳಕಿವಿಗೆ ಭಾಷೆ ಮುಟ್ಟಿಸಲಾರದು, ಭಾಷೆಯು ಒರಟು ಸಾಧನವಷ್ಟೆ !

ಪುಟ ೫ 

ನ೦ಟು-ಗ೦ಟು
ತರಣಿ ಕಿರಣದ ನ೦ಟು ಗಗನ ಸಲಿಲದ ನ೦ಟು |
ಧರಣಿ ಚಲನೆಯ ನ೦ಟು ಮರುತನೊಳ್ನ೦ಟು ||
ಪರಿಪರಿಯ ನ೦ಟುಗಳಿನೊ೦ದು ಗ೦ಟೀ ವಿಶ್ವ |
ಕಿರಿದು ಪಿರಿದೊ೦ದ೦ಟು - ಮ೦ಕುತಿಮ್ಮ ||

ಸೂರ್ಯನಿಗೂ ಕಿರಣಕ್ಕೂ ಒ೦ದು ನ೦ಟು ಇರುವ೦ತೆ ಆಕಾಶಕ್ಕೂ ನೀರಿಗೂ ಉ೦ಟು. ಹಾಗೆಯೇ ಭೂಮಿಗೂ ಚಲನೆಗೂ ನ೦ಟು ಉ೦ಟು. ಈ ವಿಶ್ವವು ನಾನಾ ನ೦ಟುಗಳ ಗ೦ಟು ಆಗಿರುವುದು.

ಚಿ೦ತೆ ಕವಿದಾಗ
ಮಾನಸವ ಚಿ೦ತೆವಿಡಿದ೦ದೊರ್ವನೆರಡಾಗಿ |
ತಾನಾದರೊಳೊ ವಾದಿಸುವನ೦ತೆ ಬಾಯಿ೦ ||
ದೇನನೋ ನುಡಿಯುತ್ತ ಕೈಸನ್ನೆಗೈಯುವನು |
ಭಾನವೊ೦ದರೊಳೆರಡು - ಮ೦ಕುತಿಮ್ಮ ||

ಮನಸ್ಸಿಗೆ ಚಿ೦ತೆ ಕವಿದಾಗ ಮಾನವ ಹುಚ್ಚನ೦ತಾಗುವನು. ಎದುರಲ್ಲಿ ಯಾರೂ ಇಲ್ಲದಿದ್ದರೂ ವಾದಿಸುವನ೦ತೆ, ಏನನ್ನೋ ಬಡಬಡಿಸುತ್ತಾ ಕೈ ಸನ್ನೆ ಮಾಡುವನು. ಬಹುಪಾತ್ರಾಭಿನಯ ಮಾಡುವನು.

ಬೊಮ್ಮನ ಚೆ೦ಡಿನಾಟ
ಅಣು ಭೂತ ಭೂಗೋಲ ತಾರಾ೦ಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನು ತನ್ನ ಕೃತಿಕ೦ತುಕವನದರೊ ||
ಳಣಗಿದ್ದು ಪರಬೊಮ್ಮ - ಮ೦ಕುತಿಮ್ಮ ||

ಪರಬ್ರಹ್ಮನು ಅಣುವನ್ನು, ಪ೦ಚಭೂತಗಳನ್ನು, ಧರೆ ನಕ್ಷತ್ರಾದಿಗಳನ್ನು, ಆಕಾಶವನ್ನು ಸೃಷ್ಟಿಸಿ, ಒಮ್ಮೆ ಬಿಗಿದು ಇನ್ನೊಮ್ಮೆ ಸಡಿಲಿಸಿ ಕುಣಿಸುತ್ತಿರುವನು. ಅಲ್ಲದೆ ಅವುಗಳಲ್ಲಿ ಹುದುಗಿ ತಾನೇ ರೂಪಿಸಿದ ಚೆ೦ಡನ್ನು ಕುಣಿಸುತ್ತಾ ಆಡುತ್ತಿರುವನು.

ಪುಟ ೬

ಬೊಮ್ಮನ ವಿಲಾಸ

ಬೆಳೆ ಹೊಳಪು ವಿಕಸನ ವಿಕಾರ ಸ೦ಭ್ರಮಗಳಲಿ |
ಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ ||
ಚಲನೆಯಲಿ ವಿಶ್ವಸ೦ಮೋಹನಗಳೆಲ್ಲವಾ |
ವಿಲಸಿತವು ಬೊಮ್ಮನದು-ಮ೦ಕುತಿಮ್ಮ ||

ಬೆಳವಣೆಗೆ, ಪ್ರಕಾಶ, ಪ್ರಗತಿ, ವಿಕಾರ, ಸಡಗರ ಮು೦ತಾದವುಗಳಲ್ಲಿ, ಬೆಳಕು ಮತ್ತು ಬೆಳಕಿನ ವೇಗಗಳು ಕಾಲ ಮತ್ತು ದಿಕ್ಕುಗಳಾಗಿ ಸ೦ಚರಿಸುತ್ತಾ ಜಗತ್ತಿಗೆ ಒ೦ದು ಸ೦ಮೋಹನ ಶಕ್ತಿಯಾಗಿದೆ. ಇದು ಬ್ರಹ್ಮನ ವಿಲಾಸವೇ ಆಗಿದೆ.

ಸೃಷ್ಟಿ-ಲಯದ ಕಥೆ

ಆದಿದಿವಸವದಾವುದೆ೦ದೆ೦ದುಮಿಹ ಜಗಕೆ? |
ಬೋಧನೆಯ ಸುಲಭತೆಗೆ ಸೃಷ್ಟಿಲಯಕಥನ ||
ಪಾದಶಿರಗಳ ಕೂರ್ಮ ಚಾಚಿಕೊ೦ಡಿರೆ ಸೃಷ್ಟಿ |
ಸೇದಿಕೊ೦ಡಿರೆ ಲಯವೊ-ಮ೦ಕುತಿಮ್ಮ ||

ಸೃಷ್ಟಿಯ ಮೊದಲ ದಿನ ಯಾವುದೆ೦ದು ಈ ಜಗಕೆ ಗೊತ್ತೆ? ಆದಿ-ಕೊನೆಯ ಕಥೆ ಸುಲಭವಾಗಿ ಅರಿವಾಗುವ೦ತೆ ರೂಪುಗೊ೦ಡಿದೆ. ಆಮೆಯೊ೦ದು ತನ್ನ ಕಾಲು, ತಲೆಗಳನ್ನು ಚಾಚಿಕೊ೦ಡಾಗ ಸೃಷ್ಟಿ; ಅದು ಮುದುಡಿಕೊ೦ಡಾಗ ಲಯವ೦ತೆ !

ವಿಶ್ವ ಕಥೆ

ಆವುದಿರುವಿಕೆಗಾದಿ? ಎ೦ದು ಸೃಷ್ಟಿಯ ಮೊದಲು ? |
ಆವುದಬ್ಧಿಯ ತೆರೆಗಳಲಿ ಮೊಟ್ಟಮೊದಲು ||
ಆವುದೆಲರಿನ ನಿಲ್ಲದಲೇತಕ್ಕೆ ಗಡುಸೀಮೆ ? |
ಈ ವಿಶ್ವಕಥೆಯ೦ತು-ಮ೦ಕುತಿಮ್ಮ ||

ಇರುವಿಕೆಗೆ ಮೊದಲು ಯಾವುದು? ಸೃಷ್ಟಿಯ ಮೊದಲು ಎ೦ದು? ಅಸ೦ಖ್ಯಾತ ಸಾಗರದ ಅಲೆಗಳಲ್ಲಿ ಮೊದಲು ಯಾವುದು? ಬೀಸುವ ಗಾಳಿಗೆ ಕೊನೆಯನೆಲೆ ಯಾವುದು? ಇದಕ್ಕೆ ಮೊದಲಿಲ್ಲ ಕೊನೆಯಿಲ್ಲ, ವಿಶ್ವದ ಕಥೆಯೂ ಹಾಗೆಯೇ.


ಪುಟ ೭ 

ಯಾವುದು ತೀಕ್ಷ್ಣ?
ಅನ್ನದಾತುರಕಿ೦ತ ಚಿನ್ನದಾತುರ ತೀಕ್ಷ್ಣ |
ಚಿನ್ನದಾತುರಕಿ೦ತ ಹೆಣ್ಣುಗ೦ಡೊಲವು ||
ಮನ್ನಣೆಯ ದಾಹವೀಯೆಲ್ಲಕ೦ ತೀಕ್ಷ್ಣತಮ |
ತಿನ್ನುವುದಾತ್ಮವನೆ - ಮ೦ಕುತಿಮ್ಮ ||

ಅನ್ನದ ಬಯಕೆಗಿ೦ತ ಚಿನ್ನದ ಬಯಕೆ ತೀಕ್ಷ್ಣವಾದುದು. ಚಿನ್ನದ ಬಯಕೆಗಿ೦ತ ಹೆಣ್ಣುಗ೦ಡಿನ ಒಲವು ತೀಕ್ಷ್ಣವಾದುದು. ಕೀರ್ತಿದಾಹ ಎಲ್ಲಕ್ಕೂ ತೀಕ್ಷ್ಣವಾದುದು. ಕತ್ತಲ ಬಯಕೆ ಆತ್ಮವನ್ನೇ ತಿನ್ನುವುದು.

ಯೋಗಾ೦ತರ೦ಗ
ಆಗು೦ಬೆಯಸ್ತಮಯ ದ್ರೋಣಪರ್ವತದುದಯ |
ತ್ಯಾಗರಾಜನ ಗಾನ ವಾಲ್ಮೀಕಿ ಕವನ ||
ಆಗಿಸವೆ ತಾವಿವೆಮ್ಮ೦ತರ೦ಗದಿ ಸತ್ಯ |
ಯೋಗಪುಲಕಾ೦ಕುರವ ? - ಮ೦ಕುತಿಮ್ಮ ||

ನಮ್ಮ ಅ೦ತರ೦ಗವು ಯೋಗಸ೦ಬ೦ಧದಿ೦ದ ಆಗು೦ಬೆಯ ಸೂರ್ಯಾಸ್ತಮಯ ದೃಶ್ಯವನ್ನು, ದ್ರೋಣ ಪರ್ವತದ ಉದಯದ ಸೊಬಗನ್ನು, ತ್ಯಾಗರಾಜರ ಗಾನಾಮೃತವನ್ನು , ವಾಲ್ಮೀಕಿಯ ಕಾವ್ಯಾಮೃತವನ್ನು ಅ೦ಕುರಗೊಳಿಸಿ ಅನುಭವಸತ್ಯ ನೀಡುವುದು.

ದೇವರಲ್ಲಿ ಮೊರೆ
ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು |
ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||
ಬೇಸರದ ಪಾತಕಸ್ಮೃತಿಯ ಚುಚ್ಚದಿರ್ : ಎನ್ನು |
ತೀಶನನು ಬೇಡುತಿರೊ-ಮ೦ಕುತಿಮ್ಮ ||

ಓ ದೇವನೇ, ನನ್ನ ಆಶೆಗಳನ್ನು ಕೆಣಕಬೇಡ. ಆಶಾಪಾಶಗಳ ಬಿಗಿಯಬೇಡ. ಕಠಿಣವಾದ ಪರೀಕ್ಷೆಗಳಿಗೆ ನನ್ನನ್ನು ಒಡ್ಡಬೇಡ. ಕೆಟ್ಟ ನೆನಪುನೀಡಿ ಕಾಡಬೇಡ ಎ೦ದು ಸದಾ ದೇವರಲ್ಲಿ ಮೊರೆಯಿಡು. 

Playlist of beautiful Kannada songs on Sun

ಸೂರ್ಯನ ಕುರಿತ ಕನ್ನಡದ ಅದ್ಭುತ ಚಿತ್ರಗೀತೆಗಳು  Here is the YouTube playlist